* * * * * * HASSAN DISTRICT POLICE

Wednesday, April 7, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:06-04-2021

 


                           ಪತ್ರಿಕಾ ಪ್ರಕಟಣೆ             ದಿನಾಂಕ: 06-04-2021

 ಮೊಸಳೆ ಹೊಸಹಳ್ಳಿ-ಮಾರನಾಯಕನಹಳ್ಳಿ ರಸ್ತೆ ಬಳಿ ಮೃತ ದೇಹವನ್ನು ಎಸೆದು ಹೋಗಿದ್ದ ಮಹಿಳೆ ಸೇರಿದಂತೆ 3 ಜನ ಕೊಲೆ ಆರೋಪಿಗಳ ಬಂಧನ.

       ಈ ಪ್ರಕರಣದ ಪಿರ್ಯಾದಿ ಶಿವಣ್ಣನವರ ಅಣ್ಣ ಮಂಜುನಾಥ ರವರು ಯಾವುದೋ ಪ್ರೈವೆಟ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ಈಗ್ಗೆ 1 ವರ್ಷದ ಹಿಂದೆ ಕೆಲಸವನ್ನು ಬಿಟ್ಟು ಮನೆಯಲ್ಲೆ ಇದ್ದವರು ದಿನಾಂಕ 01/04/2021 ರಂದು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಮನೆಯಿಂದ ಮೈಸೂರಿಗೆ ಹೋಗುತ್ತೆನೆಂದು ಹೇಳಿ ಹೋಗಿದ್ದು ರಾತ್ರಿ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿಗೆ ದಿನಾಂಕ 05/04/2021 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಯಾರೋ ಪೋನ್ ಮಾಡಿ ನಿಮ್ಮ ಅಣ್ಣ ಮಂಜುನಾಥರವರನ್ನು ಯಾರೋ ಕೊಲೆ ಮಾಡಿ ಮಾರನಾಯಕನಹಳ್ಳಿ ಗ್ರಾಮದ ಬಳಿ ಹಾಕಿ ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದು ನೋಡಲಾಗಿ ಅಣ್ಣ ಮಂಜುನಾಥ ರವರಗೆ ತಲೆಗೆ ರಕ್ತಗಾಯವಾಗಿದ್ದು ಮತ್ತು ಎಡಗಾಲಿನ ಬೆರಳಿಗೆ ಉಜ್ಜಿದಂತೆ ಆಗಿದ್ದು, ಮಂಜುನಾಥ ರವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ಯಾವುದೋ ದ್ವೇಷದಿಂದ ಕೊಲೆ ಮಾಡಿ ಸಾಕ್ಷಿಯನ್ನು ಮರೆಮಾಚುವ ಉದ್ದೇಶದಿಂದ ಯಾವುದೋ ವಾಹನದಲ್ಲಿ ತಂದು ಮೊಸಳೆ ಹೊಸಹಳ್ಳಿ ಮಾರನಾಯಕನಹಳ್ಳಿ ರಸ್ತೆಯಲ್ಲಿ ಮೃತದೇಹವನ್ನು ಎಸೆದು ಹೋಗಿರುತ್ತಾರೆಂದು ಹಾಗೂ  ಮೊಸಳೆ ಹೊಸಹಳ್ಳಿ ಗ್ರಾಮದ ಮಂಗಳ ರವರು ಏನೋ ಮಾಡಿರಬಹುದೆಂದು ಅನುಮಾನವಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ಶ್ರೀ ಮಂಜುನಾಥ, ರವರ ತಮ್ಮ ಶ್ರೀ ಶಿವಣ್ಣ, ರವರು ದಿನಾಂಕ: 05-04-2021 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಮೊ,ನಂ 33/2021 ಕಲಂ 302, 201 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

 

     ಈ ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶ್ರೀನಿವಾಸಗೌಡ.ಆರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಮತ್ತು ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಸ್ವಾಮಿಗೌಡ.ಟಿ.ಆರ್ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್.ಪಿ. ಸಿ.ಪಿ.ಐ, ಹಾಸನ ಗ್ರಾಮಾಂತರ ವೃತ್ತ ಮತ್ತು ಗೊರೂರು ಪೊಲೀಸ್ ಠಾಣಾ ಪಿ.ಎಸ್.ಐ, ಶ್ರೀ ಸಾಗರ್.ಎಸ್.ಎಲ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಪತ್ತೆಗಾಗಿ ನಿಯೋಜಿಸಲಾಗಿತ್ತು.

       ತನಿಖಾ ತಂಡವು ಅದೇ ದಿನ ದಿನಾಂಕ 05.04.2021 ರಂದು ಸಂಜೆ ಆರೋಪಿತೆ ಮಂಗಳ, ಆಕೆಯ ಮಗ ಮಂಜುನಾಥ ಮತ್ತು ಮತ್ತೊಬ್ಬ ಆರೋಪಿ ರಾಘವೇಂದ್ರರವರನ್ನು ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಗಿ. ಈ ಪ್ರಕರಣದ ಮೃತ ಮಂಜುನಾಥ ಎಂಬಾತನು ಆರೋಪಿತೆ ಮಂಗಳ ಎಂಬಾಕೆಯೊ0ದಿಗೆ ಸಲಿಗೆಯಿಂದ ಇದ್ದು ಈಗ್ಗೆ 1 ವರ್ಷದಿಂದ ಆರೋಪಿತೆ ಮಕ್ಕಳು ಸಲಿಗೆಯಿಂದ ಇರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಮಂಗಳ ರವರು ಮಂಜುನಾಥನನ್ನು ದೂರವಿಟ್ಟಿದ್ದ ಬಗ್ಗೆ ಮನನೊಂದು ದಿನಾಂಕ 04-04-2021 ರಂದು ಸಂಜೆ 07.00 ಗಂಟೆ ಸಮಯದಲ್ಲಿ ಮಂಜುನಾಥನು ಮಂಗಳ, ರವರ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು, ಮಂಜುನಾಥನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದೇ ಆತನ ಮರಣವನ್ನು ಮರೆ ಮಾಚುವ ಉದ್ದೇಶದಿಂದ ಆರೋಪಿತೆ ಮಂಗಳಈಕೆಯ ಮಗ ಮಂಜುನಾಥ ಹಾಗೂ ಆತನ ಸ್ನೇಹಿತ ರಾಘವೇಂದ್ರ ರವರುಗಳು ಸೇರಿಕೊಂಡು ಮೋಟಾರ್ ಬೈಕ್ ಒಂದರಲ್ಲಿ ಮೊಸಳೆ ಹೊಸಹಳ್ಳಿ-ಮಾರನಾಯಕನಹಳ್ಳಿ ರಸ್ತೆ ಬದಿಗೆ ತಂದು ಮೃತದೇವನ್ನು ಹಾಕಿ ಹೋಗಿದ್ದಾಗಿ ತಿಳಿಸಿ ತಪ್ಪೊಪ್ಪಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

 ದಸ್ತಗಿರಿ ಮಾಡಲಾದ ಆರೋಪಿಗಳ ವಿವರ

 1 ಮಂಗಳಾ ಕೊಂ ಲೇಟ್ ನಾರಾಯಣ, 40 ವರ್ಷ, ನಯನ ಕ್ಷತ್ರಿಯ ಜನಾಂಗ, ಮನೆ ಕೆಲಸ, ಮೊಸಳೆ ಹೊಸಹಳ್ಳಿ ಗ್ರಾಮ,

    ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೋಕು

2 ಮಂಜುನಾಥ ಬಿನ್ ಲೇ ನಾರಾಯಣ, 23 ವರ್ಷ, ನಯನ ಕ್ಷತ್ರಿಯ ಜನಾಂಗ, ಕ್ಷೌರಿಕ ವೃತ್ತಿ, ಮೊಸಳೆ ಹೊಸಹಳ್ಳಿ ಗ್ರಾಮ,

    ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೋಕು

3 ರಾಘವೇಂದ್ರ ಬಿನ್ ಲಕ್ಷ್ಮೇಗೌಡ, 26 ವರ್ಷ, ವಕ್ಕಲಿಗರು, ವ್ಯವಸಾಯ, ಹುಳುವಾರೆ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ  ತಾಲ್ಲೂಕು.  

    ಕೊಲೆ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಶ್ರೀ ಸುರೇಶ್.ಪಿ. ಸಿ.ಪಿ.ಐ, ಹಾಸನ ಗ್ರಾಮಾಂತರ ವೃತ್ತಶ್ರೀ ಸಾಗರ್ ಎಸ್.ಎಲ್ ಗೊರೂರು ಪೊಲೀಸ್ ಠಾಣೆ, ರವಿಕುಮಾರ್. ಹೆಚ್.ಸಿ-295 ಸುಬ್ರಹ್ಮಣ್ಯ ಹೆಚ್.ಸಿ-298, ಜಗದೀಶ ಪಿ.ಸಿ 73, ಅರುಣ್ ಕುಮಾರ್ ಪಿ.ಸಿ-37 ಮತ್ತು ಮ.ಪಿ.ಸಿ-405 ಶ್ರೀಮತಿ ಹೇಮಾವತಿ, ರವರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶ್ರೀನಿವಾಸಗೌಡ.ಆರ್, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

        ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿದೆ.


 


No comments: